ಮಹೇಂದ್ರವರ್ಮ 1 	 
	
ಆಳ್ವಿಕೆ ಕಾಲ 600-630. ಪಲ್ಲವರ ಪ್ರಸಿದ್ಧ ಅರಸ. ಅಸಾಧಾರಣ ಪ್ರತಿಭೆಯನ್ನೂ ಬಹುಮುಖ ವ್ಯಕ್ತಿತ್ವವನ್ನೂ ಹೊಂದಿದ್ದ. ದಕ್ಷಿಣ ಭಾರತದಲ್ಲಿ ಪರಮಾಧಿಕಾರಕ್ಕಾಗಿ ಪಲ್ಲವ ಮತ್ತು ಚಾಳುಕ್ಯರಲ್ಲಿ ದೀರ್ಘಹೋರಾಟ ಆರಂಭವಾದದ್ದೂ ಇವನ ಕಾಲದಲ್ಲಿಯೇ. ಚಾಳುಕ್ಯ ಸಾಮ್ರಾಟ ಇಮ್ಮಡಿ ಪುಲಕೇಶಿ ಮಹೇಂದ್ರವರ್ಮವನ್ನು ಸೋಲಿಸಿದ (610). ಪಲ್ಲವಸೈನ್ಯ ಸೋತು ಹಿಮ್ಮೆಟ್ಟಿ ಕಂಚಿ ಕೋಟೆಯಲ್ಲಿ ರಕ್ಷಣೆ ಪಡೆದುದನ್ನು ಐಹೊಳೆಯ ಶಿಲಾಶಾಸನ ವರ್ಣಿಸುತ್ತದೆ. ಈ ಯುದ್ಧದ ಪರಿಣಾಮವಾಗಿ ಪಲ್ಲವ ರಾಜ್ಯದ ಉತ್ತರ ಭಾಗಗಳು ಮಹೇಂದ್ರವರ್ಮನ ಕೈಬಿಟ್ಟವೆಂದು ತಿಳಿದುಬಂದಿದೆ. ಪಲ್ಲವರಾಜ್ಯ ದಕ್ಷಿಣದಲ್ಲಿ ಕಾವೇರಿಯ ವರೆಗೆ ವಿಸ್ತರಿಸಿದ್ದಿತೆಂಬುದನ್ನು ಈತನ ತಿರುಚ್ಚಿರಪಳ್ಳಿ ಶಾಸನ ಉಲ್ಲೇಖಿಸುತ್ತದೆ.

ಇವನಿಗೆ ಗುಣಭಾರ, ಸತ್ಯಸಂಧ, ಪರಮೇಶ್ವರ ಮಹೇಂದ್ರವಿಕ್ರಮ. ಚೇತಕ್ಕಾರಿ. ವಿಚಿತ್ರ, ಚಿತ್ರ ಮತ್ತು ಮಟ್ಟವಿಲಾಸ ಎಂಬ ಬಿರುದುಗಳಿದ್ದುವು. ಮೊದಲಿಗೆ ಜೈನಮತಾವಲಂಬಿಯಾಗಿದ್ದ ಇವನು ಅನಂತರ ಶೈವ ಮತಾವಲಂಬಿಯಾಗಿ ಅದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದ.

ಕಲೆ, ಸಾಹಿತ್ಯ ಮತ್ತು ಸಂಸ್ಕøತಿಗಳ ಪ್ರಗತಿಗೆ ಪ್ರೋತ್ಸಾಹ ನೀಡಿದ. ಈತ ಸ್ವತಃ ಬರಹಗಾರನಾಗಿದ್ದು ಕವಿಗಳಿಗೆ ಮತ್ತು ಲೇಖಕರಿಗೆ ಆಶ್ರಯ ನೀಡಿದ್ದ. ಮಟ್ಟ ವಿಲಾಸಪ್ರಹಸನವೆಂಬ ಪದ್ಯಕಾವ್ಯವೊಂದನ್ನು ಸಂಸ್ಕøತದಲ್ಲಿ ರಚಿಸಿದ. ಇವನ ಕಾಲದಲ್ಲಿ ಅನೇಕ ಗುಹಾಂತರ್ದೇವಾಲಯಗಳು ನಿರ್ಮಾಣವಾದವು. ಮಹೇಂದ್ರವಾಡಿಯ ಪ್ರಖ್ಯಾತ ಸರೋವರ ಇವನ ನಿರ್ಮಾಣ. 	  
	(ಎಚ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ